Secretary Message

Secretary Message

ಯಶ್‍ವಂತ್‍ರಾಜ್ ನಾಗಿರೆಡ್ಡಿ
ಗೌರವ ಕಾರ್ಯದರ್ಶಿ

1953ರಲ್ಲಿ ಜನ್ಮ ತಾಳಿದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇಂದು ರಾಜ್ಯದ ಹೆಮ್ಮೆಯ ವ್ಯಾಪಾರಸ್ಥರ, ಉದ್ಯಮಿಗಳ, ವರ್ತಕರ ಮತ್ತು ಕೈಗಾರಿಕೋದ್ಯಮಿಗಳ ಒಕ್ಕೂಟ ವ್ಯವಸ್ಥೆಯ ಹೆಮ್ಮೆಯ ಸಂಸ್ಥೆಯಾಗಿದೆ. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ 2003 ರಲ್ಲಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡು ಯಶಸ್ಸಿನ ಒಂದೊಂದೇ ಗರಿಯನ್ನು ತನ್ನ ಮುಡಿಯಲ್ಲಿ ಹೊತ್ತು ದಾಪುಗಾಲು ಇಡುತ್ತಾ ಮುಂದೆ ಸಾಗುತ್ತಿದೆ. ನಮ್ಮ ಬೃಹತ್ ಸಂಸ್ಥೆ ಬಳ್ಳಾರಿ ನಗರ ಹಾಗು ಜಿಲ್ಲೆಯಾದ್ಯಂತ ತನ್ನ 1650 ಸದಸ್ಯರನ್ನು ಹೊಂದಿದ್ದು ನಿತ್ಯವೂ ಒಂದಿಲ್ಲೊಂದು ಸಾಧನೆಯ ಗರಿಯನ್ನು ತನ್ನ ಮುಡಿಯಲ್ಲಿಡುತ್ತಾ ಹೆಮ್ಮೆಯಿಂದ ತನ್ನ ವ್ಯಾಪಾರಿ ಬಳಗದ ಪ್ರೀತಿಗೆ ಪಾತ್ರವಾಗಿದೆ.

ಇಂದಿನ ನಮ್ಮ ಕಣ್ಣೆದುರುಗಿನ ಭವ್ಯ ಸಂಸ್ಥೆಯ ನಿರ್ಮಾಣದಲ್ಲಿ ಮಾಜಿ ಅಧ್ಯಕ್ಷರುಗಳು, ಮಾಜಿ ಗೌರವ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ಮತ್ತು ಅಜೀವ ಸದಸ್ಯರ ಸಹಕಾರದ ಮತ್ತು ನಿಸ್ವಾರ್ಥ ಸೇವೆಯ ಪಾತ್ರ ಅತ್ಯಂತ ಹಿರಿದಾಗಿದೆ. ಅವರೆಲ್ಲರ ಶ್ರಮದ ಫಲವಾಗಿ ನಮ್ಮ-ನಿಮ್ಮೆಲ್ಲರ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಬಳ್ಳಾರಿ ನಗರದ ಹೃದಯ ಭಾಗದಲ್ಲಿ ತಲೆ ಎತ್ತಿ ನಿಂತಿದೆ. ಇಂತಹ ಭವ್ಯ ಸಂಸ್ಥೆಯ 13ನೇ ಕಾರ್ಯದರ್ಶಿಯಾಗಿ ನಾನು 2021ರ ಫೆಬ್ರವರಿ 01 ರಿಂದ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಅತ್ಯಂತ ಜವಾಬ್ದಾರಿಯುತ ಈ ದೊಡ್ಡ ಹೊಣೆಗಾರಿಕೆಯನ್ನು ನನ್ನ ಮೇಲೆ ನಂಬಿಕೆ ಇಟ್ಟು ವಹಿಸಿಕೊಟ್ಟಿರುವ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಿಶೇಷ ಆಹ್ವಾನಿತರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ವ್ಯಾಪಾರಸ್ಥರ ಕುಟುಂಬದಲ್ಲಿ ಬೆಳೆದು ಬಂದ ನಾನೂ ಕೂಡ ವ್ಯಾಪಾರದಲ್ಲಿ ತೊಡಗಿಕೊಳ್ಳುವುದರೊಂದಿಗೆ ಲೆಕ್ಕಪರಿಶೋಧನಾ ಕಾರ್ಯದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ನಗರದ ವ್ಯಾಪಾರಸ್ಥರಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ನನ್ನ ಮಾತೃ ಸಂಸ್ಥೆಯಾದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹಕಾರದೊಂದಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಬೆಂಗಳೂರಲ್ಲಿ ಸದಸ್ಯನಾಗಿ, ಅಲ್ಲಿನ ಸದಸ್ಯರ ಸಹಕಾರದೊಂದಿಗೆ ರಾಜ್ಯ ತೆರಿಗೆ ಸಲಹಾ ಸಮಿತಿಯ ಉಪಾಧ್ಯಕ್ಷನಾಗಿ, ಜಿಲ್ಲಾ ಸಮನ್ವಯ ಸಮಿತಿಯ ಉಪಾಧ್ಯಕ್ಷನಾಗಿ ಮತ್ತು  ಜಿಲ್ಲಾ ಸಮನ್ವಯ ಸಮಿತಿಯ ಅಧ್ಯಕ್ಷನಾಗಿ ರಾಜ್ಯದ ಮೂಲ-ಮೂಲೆಗಳಲ್ಲಿ ಸಂಚರಿಸಿ ನನ್ನ ಶಕ್ತಿ ಮೀರಿ ವ್ಯಾಪಾರಸ್ಥರು, ವರ್ತಕರು, ಉದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನನ್ನ ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ. ಅಲ್ಲದೇ ನನ್ನ ಮಾತೃ ಜಿಲ್ಲೆಯಲ್ಲಿ 2019ರ ಜೂನ್ ತಿಂಗಳಲ್ಲಿ ಎಫ್.ಕೆ. ಸಿ. ಸಿ. ಐ ಮತ್ತು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹಯೋಗದೊಂದಿಗೆ ರಾಜ್ಯ ಮಟ್ಟದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಸಮಾವೇಶವನ್ನು ನನ್ನ ಅವಧಿಯಲ್ಲಿ ತಮ್ಮೆಲ್ಲರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿರುವುದು ನನ್ನ ಜೀವನದಲ್ಲಿ ಹೊಸ ಮೈಲಿಗಲ್ಲು. ಧೀರ್ಘಕಾಲದ ಅನುಭವವನ್ನು ನನ್ನ ಮಾತೃ ಸಂಸ್ಥೆಯ ಬೆಳವಣಿಗೆಯಲ್ಲಿ ಧಾರೆ ಎರೆದು ಸಂಸ್ಥೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

2019ರಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಬಡ ನಿರುದ್ಯೋಗಿ ವಿದ್ಯಾವಂತ ಯುವಕ ಯುವತಿಯರಿಗಾಗಿ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಕೌಶಲ್ಯ ತರಬೇತಿ ಸಂಸ್ಥೆಯನ್ನು ನಮ್ಮ ನಿಕಟಪೂರ್ವ ಅಧ್ಯಕ್ಷರಾದ ಡಾ. ಡಿ. ಎಲ್. ರಮೇಶ್‍ಗೋಪಾಲ್ ಅವರು ಪ್ರಾರಂಭಿಸಿದ್ದಾರೆ. ನಾನು ಆ ಸಂಸ್ಥೆಯ ಮುಖ್ಯ ಕಾರ್ಯನರ್ವಾಹಕ ಅಧಿಕಾರಿಯಾಗಿ ಕೌಶಲ್ಯ ತರಬೇತಿ ಸಂಸ್ಥೆಗೆ ಕರ್ನಾಟಕ ಸರ್ಕಾರದ ಅಕ್ರೆಡಿಶನ್ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದೇನೆ. ಇದರಿಂದಾಗಿ ಬಡ ವಿದ್ಯಾವಂತ ನಿರುದ್ಯೋಗಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉಚಿತವಾಗಿ ಕಂಪ್ಯೂಟರ್ ತಂತ್ರಜ್ಞಾನವನ್ನು ಪಡೆಯುವಂತಾಗಿದೆ. ಇಂತಹ ವಿಷಯವನ್ನು ತಮ್ಮೊಂದಿಗೆ ಹಂಚಿಕೊಳ್ಳುವುದೇ ನನಗೆ ಹೆಮ್ಮೆಯ ವಿಷಯ.

ಕಳೆದ ವರ್ಷ ಕೋವಿಡ್-19ರ ಪರಿಣಾಮದಿಂದಾಗಿ ಬಹುತೇಕ ವರ್ತಕರು ಮತ್ತು ವ್ಯಾಪಾರಸ್ಥರು ಸಂಕಷ್ಟದಲ್ಲಿದ್ದಾರೆ, ನನ್ನ ಅವಧಿಯಲ್ಲಿ ಇವರಿಗೆ ಸರಕಾರದಿಂದ ಬರಬಹುದಾದ ಎಲ್ಲಾ ಸವಲತ್ತುಗಳನ್ನು ತಂದು ಕೊಡಲು ಪ್ರಯತ್ನಿಸುತ್ತೇನೆ. ಜಿಲ್ಲಾಡಳಿತದಿಂದ ನಮ್ಮ ಸಂಸ್ಥೆಯ ಸ್ಕಿಲ್ ಕಾಲೇಜಿಗೆ ಮಂಜೂರಾದ ಒಂದು ಎಕರೆ ನಿವೇಶನವನ್ನು ರಾಜ್ಯ ಮಟ್ಟದಲ್ಲಿ ಮಂಜೂರು ಮಾಡಿಸಿಕೊಂಡು ಬಂದು ಇನ್ನೂ ಹೆಚ್ಚಿನ ರೀತಿಯಲ್ಲಿ ಬಡ ವಿದ್ಯಾವಂತ ಯುವಕ/ಯುವತಿಯರ ಬಾಳಿಗೆ ಉದ್ಯೋಗ ದೊರಕಿಸಿಕೊಟ್ಟು ನಮ್ಮ ಸಂಸ್ಥೆಯ ಯಶಸ್ಸಿಗೆ ಮನಃಪೂರ್ವಕವಾಗಿ ಸೇವೆ ಸಲ್ಲಿಸುತ್ತೇನೆ.
ನನ್ನ ಪ್ರತಿಯೊಂದು ಸಾಧನೆಯ ಹೆಜ್ಜೆಯಲ್ಲಿ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಕಮಿಟಿಗಳ ಚೇರ್‍ಮನ್‍ಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ಅಜೀವ ಸದಸ್ಯರ ಸಹಕಾರವನ್ನು ಕೋರುತ್ತೇನೆ.
                                               

ಯಶ್‍ವಂತ್‍ರಾಜ್ ನಾಗಿರೆಡ್ಡಿ
ಗೌರವ ಕಾರ್ಯದರ್ಶಿ