Secretary Message

Secretary Message

SRI. K. C. SURESH BABU - secretary bdcci

Sri. K. C. Suresh Babu

Hon-Secretary B D C C & I

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇಂದು ರಾಜ್ಯದ ಹೆಮ್ಮೆಯ ವ್ಯಾಪಾರಸ್ಥರ, ಉದ್ಯಮಿಗಳ, ವರ್ತಕರ ಮತ್ತು ಕೈಗಾರಿಕೋದ್ಯಮಿಗಳ ಒಕ್ಕೂಟ ವ್ಯವಸ್ಥೆಯ ಸಂಸ್ಥೆಯಾಗಿದೆ. 1953ರಲ್ಲಿ ಜನ್ಮ ತಾಳಿದ ನಮ್ಮ ಸಂಸ್ಥೆ 2003 ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡು ಯಶಸ್ಸಿನ ಕನಸನ್ನು ಹೊತ್ತು ದಾಪುಗಾಲು ಇಡುತ್ತಾ ಮುಂದೆ ಸಾಗುತ್ತಿದೆ. ನಮ್ಮ ಬೃಹತ್ ಸಂಸ್ಥೆ ಬಳ್ಳಾರಿ ನಗರ ಹಾಗು ಜಿಲ್ಲೆಯಾದ್ಯಂತ ತನ್ನ 1600 ಸದಸ್ಯರನ್ನು ಹೊಂದಿದ್ದು ನಿತ್ಯವೂ ಒಂದಿಲ್ಲೊಂದು ಸಾಧನೆಯ ಗರಿಯನ್ನು ತನ್ನ ಮುಡಿಯಲ್ಲಿಡುತ್ತಾ ಹೆಮ್ಮೆಯಿಂದ ತನ್ನ ವ್ಯಾಪಾರಿ ಬಳಗದ ಪ್ರೀತಿಗೆ ಪಾತ್ರವಾಗಿದೆ.

ಇಂದಿನ ನಮ್ಮ ಕಣ್ಣೆದುರುಗಿನ ಭವ್ಯ ಸಂಸ್ಥೆಯ ನಿರ್ಮಾಣದಲ್ಲಿ ಮಾಜಿ ಅಧ್ಯಕ್ಷರುಗಳು, ಮಾಜಿ ಗೌರವ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ಮತ್ತು ಅಜೀವ ಸದಸ್ಯರ ಸಹಕಾರದ ಮತ್ತು ನಿಸ್ವಾರ್ಥ ಸೇವೆಯ ಪಾತ್ರ ಹಿರಿದಾಗಿದೆ. ಅವರೆಲ್ಲರ ಶ್ರಮದ ಫಲವಾಗಿ ನಮ್ಮ-ನಿಮ್ಮೆಲ್ಲರ ಶಕ್ತಿ ಕೇಂದ್ರ ಬಳ್ಳಾರಿ ನಗರದ ಹೃದಯ ಭಾಗದಲ್ಲಿ ತಲೆ ಎತ್ತಿ ನಿಂತಿದೆ. ಇಂತಹ ಭವ್ಯ ಸಂಸ್ಥೆಯ 12ನೇ ಕಾರ್ಯದರ್ಶಿಯಾಗಿ ನಾನು 2019ರ ಅಕ್ಟೋಬರ್‍ನಿಂದ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಈ ದೊಡ್ಡ ಹೊಣೆಗಾರಿಕೆಯನ್ನು ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿಯನ್ನು ವಹಿಸಿಕೊಟ್ಟಿರುವ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರ ಮತ್ತು ವಿಶೇಷ ಆಹ್ವಾನಿತರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ವ್ಯಾಪಾರಸ್ಥರ ಕುಟುಂಬದಲ್ಲಿ ಜನ್ಮ ತಾಳಿ ನಾನೂ ಕೂಡ ವ್ಯಾಪಾರದಲ್ಲಿ ತೊಡಗಿಕೊಂಡು ಜೊತೆಯಲ್ಲಿ ಕೈಲಾದಷ್ಟು ಸಮಾಜದ ಸೇವೆ ಮಾಢುತ್ತಾ ಬಂದಿರುವ ನನಗೆ ಈ ಸ್ಥಾನ ದೊರೆತಿರುವುದು ಮನಸ್ಸಿನ ಮೂಲೆಯಲ್ಲಿ ಧನ್ಯತಾ ಭಾವವನ್ನು ಮೂಡಿಸಿದೆ. ನನ್ನ ಮುಂದೆ ನಿತ್ಯವೂ ಅನೇಕ ಸವಾಲುಗಳು ಬರುತ್ತಲೇ ಇರುತ್ತವೆ ಅವುಗಳನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ನನ್ನೊಂದಿಗೆ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಕಮಿಟಿಗಳ ಚೇರ್‍ಮನ್‍ಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಿಶೇಷ ಆಹ್ವಾನಿತರು ಸಹಕಾರಿಯಾಗಿದ್ದಾರೆ.


ಇತ್ತೀಚೆಗೆ ನಮ್ಮ ಸಂಸ್ಥೆಯ ವತಿಯಿಂದ ಬಡ ನಿರುದ್ಯೋಗಿ ವಿದ್ಯಾವಂತ ಯುವಕ ಯುವತಿಯರಿಗಾಗಿ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಕೌಶಲ್ಯ ತರಬೇತಿ ಸಂಸ್ಥೆಯನ್ನು ನಮ್ಮ ನಿಕಟಪೂರ್ವ ಅಧ್ಯಕ್ಷರಾದ ಡಾ. ಡಿ. ಎಲ್. ರಮೇಶ್‍ಗೋಪಾಲ್ ಅವರು ಪ್ರಾರಂಭಿಸಿದ್ದಾರೆ ಆ ಸಂಸ್ಥೆಯನ್ನು ಮುಂದುವರಿಸಿಕೊಂಡು ಹೋಗುವುದು ಜೊತೆಯಲ್ಲಿ ಜಿಲ್ಲಾಡಳಿತದಿಂದ ಒಂದು ಎಕರೆ ನಿವೇಶನ ಸಂಸ್ಥೆಯ ಕೌಶಲ್ಯ ತರಬೇತಿ ಕಾಲೇಜಿಗಾಗಿ ಮಂಜೂರಾಗುವ ಹಂತದಲ್ಲಿದ್ದು ಈ ಹೊಣೆಗಾರಿಕೆಯು ನಮ್ಮೆಲ್ಲರ ಮೇಲಿದೆ. ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ವ್ಯಾಪಾರಸ್ಥರ, ವಾಣಿಜ್ಯೋದ್ಯಮಿಗಳ, ವರ್ತಕರ ಆಶಯಗಳನ್ನು ಈಡೇರಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ.