President's Message

President's Message

 

Mr.B. Maharudra Goud

President, BDCC&I, Ballari

 

ಪ್ರತಿಷ್ಠಿತ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ 23ನೇ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿರುವುದು ಒಬ್ಬ ಉದ್ಯಮಿಯಾಗಿ ನನಗೆ ತುಂಬಾ ಸಂತಸವಾಗಿದೆ. ಇದುವರೆಗೂ ಅನೇಕ ಅಧ್ಯಕ್ಷರು, ಗೌರವ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಉಪ ಸಮಿತಿಗಳ ಚೇರ್‍ಮನ್‍ಗಳು, ಕಾರ್ಯಕಾರಿ ಸಮಿತಿ ಸದಸ್ಯರು ತಮ್ಮದೇ ಆದ ಸೇವೆಯನ್ನು ಸಲ್ಲಿಸಿ ಸಂಸ್ಥೆಯನ್ನು ರಾಜ್ಯದಲ್ಲಿಯೇ ಮೂರನೇ ಸ್ಥಾನಕ್ಕೆ ಗುರುತಿಸುವಂತೆ ಮಾಡಿದ್ದಾರೆ, ಪ್ರತಿಯೊಬ್ಬರೂ ತಮ್ಮದೇ ಆದ ದೃಷ್ಠಿಕೋನದಲ್ಲಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ, ಅವರೆಲ್ಲರ ನಿಸ್ವಾರ್ಥ ಸೇವೆಯನ್ನು ಹೃದಯಾಂತರಾಳದಿಂದ ಸ್ಮರಿಸುತ್ತೇನೆ.

ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಮೊದಲಿನ ಕೆಲವು ಯೋಜನೆಗಳನ್ನು ಕಾರ್ಯಗತ ಮಾಡುವುದು ನನ್ನ ಮೊದಲ ಆಧ್ಯತೆಯಾಗಿದೆ. ಬಳ್ಳಾರಿ ನಗರದಲ್ಲಿ ಅತ್ಯಾಧುನಿಕ ಒಣ ಮೆಣಸಿನಕಾಯಿ ಮಾರುಕಟ್ಟೆಯನ್ನು ಸ್ಥಾಪಿಸುವ ಕಾರ್ಯದಲ್ಲಿ ಈ ಪೂರ್ವದ ಅಧ್ಯಕ್ಷರು ಸಾಕಷ್ಟು ಕೆಲಸ ಮಾಡಿದ್ದಾರೆ, ಅದನ್ನು ಮುಂದುವರಿಸಬೇಕಿದೆ. ನಗರದ ಹೊರವಲಯದಲ್ಲಿರುವ ಆಲದಹಳ್ಳಿಯಲ್ಲಿ ಈ ಕಾಮಗಾರಿಗಾಗಿ ಭೂಮಿ ಮಂಜೂರಾಗಿದ್ದು ಒಣ ಮೆಣಸಿನಕಾಯಿ ಮಾರುಕಟ್ಟೆಯ ಸ್ಥಾಪನೆಗೆ ಬೇಕಾದ ಅನುದಾನವನ್ನು ಸರಕಾರದ ಮಟ್ಟದಲ್ಲಿ ಬಿಡುಗಡೆಗೊಳಿಸಿ ಹೆಚ್ಚಿನ ಮಂಜುರಾತಿಯ ಅವಶ್ಯಕತೆಯಿದ್ದಲ್ಲಿ ಎಲ್ಲವನ್ನೂ ಪೂರ್ಣಗೊಳಿಸಿ ನಗರದ ಸುತ್ತ ಮುತ್ತಲಿನ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ. ಈ ಕಾಮಗಾರಿಯಾದರೆ ಒಣಮೆಣಸಿನಕಾಯಿ ಬೆಳೆಯುವ ರೈತರಿಗೆ ಸಾಕಷ್ಟು ಲಾಭವಾಗುತ್ತದೆ, ಜೊತೆಯಲ್ಲಿ ಒಣ ಮೆಣಸಿನಕಾಯಿಗೆ ಸಂಬಂಧಿಸಿದ ಪೂರಕ ಉದ್ಯಮಗಳ ಸ್ಥಾಪನೆಗೂ ಅನುಕೂಲವಾಗುತ್ತದೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ 2019ರಲ್ಲಿ ಬಡ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಸಹಕಾರಿಯಾಗಲು ಕೌಶಲ್ಯದ ಅಭಿವೃದ್ದಿಗಾಗಿ ಕೌಶಲ್ಯಾಭಿವೃದ್ದಿ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆ ಕರ್ನಾಟಕ ಸರಕಾರದ ಕೌಶಲ್ಯಕರ್ನಾಟಕ ಯೋಜನೆಗೆ ಮಾನ್ಯತೆಯನ್ನು ಪಡೆದಿದ್ದು ಬಡ ವಿದ್ಯಾರ್ಥಿಗಳ ಕೌಶಲ್ಯ ತರಬೇತಿ ಉಚಿತವಾಗಿ ನಡೆಯುತ್ತಿದೆ. ನಮ್ಮ ಸಂಸ್ಥೆಯಿಂದ ತರಬೇತಿ ಹೊಂದಿದ ಬಹುತೇಕ ನಿರುದ್ಯೋಗಿ ಯುವಕ/ಯುವತಿಯರು ಉದ್ಯೋಗ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮುಂಬರುವ ದಿನಗಳಲ್ಲಿ ಸಂಸ್ಥೆಯಿಂದ ಕೌಶಲ್ಯಾಭಿವೃದ್ದಿ ಕಾಲೇಜನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು ಈ ದಿಶೆಯಲ್ಲೂ ಸರಕಾರದೊಂದಿಗೆ ಪ್ರಯತ್ನ ನಡೆಯುತ್ತಿದ್ದು ಕೌಶಲ್ಯಾಭಿವೃದ್ದಿ ಕಾಲೇಜನ್ನು ಸ್ಥಾಪಿಸುವ ಉದ್ದೇಶವನ್ನು ಸಾಕಾರಗೊಳಿಸುವ ಜವಾಬ್ದಾರಿ ನನ್ನ ಆದ್ಯ ಕರ್ತವ್ಯ. ಇದರಿಂದ ಕೇವಲ ವಿದ್ಯಾರ್ಥಿಗಳಿಗೆ ಕೌಶಲ್ಯವನ್ನು ನೀಡುವುದಲ್ಲದೆ ಕೈಗಾರಿಕೆಗಳಿಗೆ ಅವಶ್ಯವಿರುವ ಮಾನವ ಸಂಪನ್ಮೂಲವನ್ನು ಒದಗಿಸಬಹುದು.

ಸಾಮಾಜಿಕ ಸೇವೆಯ ಜೊತೆಗೆ ಕೈಗಾರಿಕೆಗಳ ಅಭಿವೃದ್ದಿ ಹಾಗು ಮೆದು ಕಬ್ಬಿಣ ಕೈಗಾರಿಕೆಗಳ ಪುನಶ್ಚೇತನ್ನಕ್ಕೂ ಶ್ರಮಿಸಬೇಕಾಗಿದೆ. ನಗರದ ಸುತ್ತಮುತ್ತ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ದಿ ಪಡಿಸಲು ಸಂಬಂಧಪಟ್ಟ ಇಲಖೆಗಳೊಂದಿಗೆ ಸಮಾಲೋಚಿಸಬೇಕಾಗಿದೆ. ಯುವ ಉತ್ಸಾಹಿ ಉದ್ಯಮಿಗಳು ಕೈಗಾರಿಕೆಗಳ ಸ್ಥಾಪನೆಗೆ ಮುಂದಾದಾಗ ಅವರಿಗೆ ಸುಲಭವಾಗಿ ಸರಕಾರದ ಮಟ್ಟದಲ್ಲಿ ಅನುಮೋದನೆಗಳು ದೊರೆಯುವಂತಾಗಬೇಕಿದೆ. ಪ್ರಸ್ತುತ ಇರುವ ಕೈಗಾರಿಕಾ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿದೆ. ಕುಡತಿನಿ ಕೈಗಾರಿಕಾ ಪ್ರದೇಶವು ಕೇಂದ್ರದ ಪರಿಸರ ಮಾಲಿನ್ಯ ಇಲಾಖೆಯಿಂದ ನಿರಾಪೇಕ್ಷಣಾ ಅನುಮೋದನೆಗಾಗಿ ಕಾಯುತ್ತಿದ್ದು, ಆದಷ್ಟು ಬೇಗ ಅನುಮೋದನೆ ದೊರೆತರೆ ಇನ್ನೂ ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಯಾಗಿ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವಂತಾಗುತ್ತದೆ.

ರೈತರ ಹಿತ ಕಾಯುವ ಮಹದಾಸೆಯಿಂದ ಸದಸ್ಯರ ನೆರವಿನೊಂದಿಗೆ ಎ. ಪಿ. ಎಂ. ಸಿ ಆವರಣಕ್ಕೆ ಬರುವ ರೈತರಿಗೆ ಒಂದು ಹೊತ್ತಿನ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಇತ್ತೀಚೆಗೆ ಆರಂಭಿಸಿದ್ದು ದೇಶದ ಬೆನ್ನೆಲಬಾಗಿರವ ರ್ಯತರ ಸೇವೆಯ ಸಂಸ್ಥೆಯ ಸದಸ್ಯರ ನೆರವಿನಿಂದ ಜಾರಿಗೆ ಬಂದಿದೆ, ಇದು ನನಗೆ ಅತ್ಯಂತ ಸಂತೋಷವನ್ನು ನೀಡುವ ಸೇವೆ.
ನಿತ್ಯವೂ ನಮ್ಮ ಜೀವನದ ನಿರ್ವಹಣೆಯೊಂದಿಗೆ ಅಲ್ಪ-ಸ್ವಲ್ಪವಾದರೂ ಸಾಮಾಜಿಕ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಜೀವನ ಸಾರ್ಥಕವೆನಿಸುತ್ತದೆ.

ಶ್ರೀ ಬಿ. ಮಹಾರುದ್ರಗೌಡ
ಅಧ್ಯಕ್ಷರು